ಮುಂಬಯಿ ವಿಶ್ವವಿದ್ಯಾಲಯ -
	ಮುಂಬಯಿ ನಗರದಲ್ಲಿ 129 ವರ್ಷಗಳ ಹಿಂದೆ 18 ಜುಲ್ಯೆ 1857ರಂದು ಆರಂಭಗೊಂಡ ವಿಶ್ವವಿದ್ಯಾಲಯ ಭಾರತದ ಎರಡನೆಯ ಅತಿ ಹಳೆಯ ವಿಶ್ವವಿದ್ಯಾಲಯ. ಇದರ ಆಡಳಿತ ಕಚೇರಿ ಮೊದಲಿನಿಂದಲೂ ಮುಂಬಾಯಿಯ ಮಹಾತ್ಮಗಾಂಧಿ ರಸ್ತೆಯಲ್ಲಿದೆ.

	ಹಿನ್ನಲೆ: 1852ರಲ್ಲಿ ಆಗಸ್ಟ್ 26ರಂದು ಮುಂಬಯಿಯ ಎಲ್‍ಫಿನ್‍ಸ್ಟನ್ ಇನ್‍ಸ್ಟಿಟ್ಯೂಟ್‍ನ ಕೋಣೆಯೊಂದರಲ್ಲಿ, ವಿಶ್ವವಿದ್ಯಾಲಯ ಶಿಕ್ಷಣ ಪ್ರಾರಂಭಿಸುವ ಉದ್ದೇಶಕ್ಕಾಗಿ ಸಂಸ್ಥೆಯೊಂದನ್ನು ಸ್ಥಾಪಿಸಲು ಆಗಿನ ಹಿರಿಯ ಸಮಾಜಸೇವಕ ಹಾಗೂ ದೇಶಭಕ್ತರ ಸಭೆಯೊಂದು ಜರಗಿತು. ಈ ಸಭೆಯಲ್ಲಿ ಜಗನ್ನಾಥ ಶಂಕರ ಶೇಠ್, ಸರ್ ಕಾಮಸ್ ಜೀ ಜಹಾಂಗೀರ್, ದಾದಾಭಾಯಿ ನೌರೋಜೀ ಜಹಾಂಗೀರ್ ದಾದಾಭಾಯಿ ಮಹಮ್ಮದ ಇಬ್ರಾಹಿಮ್, ಬ್ರೇಜ್ ಫೆರ್ನಾಂಡಿಸ್ ಮೊದಲಾದ ಹಿರಿಯರಿದ್ದರು. ಸಭೆ ಜಗನ್ನಾಥ ಶಂಕರ ಶೇಠರ ಅಧ್ಯಕ್ಷತೆಯಲ್ಲಿ ನಡೆಯಿತು. 'ದಿ ಬಾಂಬೆ ಅಸೋಸಿಯೇಶನ್ ಎಂಬ ಹೆಸರಿನ ಸಂಸ್ಥೆಯೊಂದನ್ನು ಸ್ಥಾಪಿಸಲಾಯಿತು. ಈ ಸಂಸ್ಥೆ 1836ರಲ್ಲಿ ಲಂಡನ್ನಿನಲ್ಲಿ ಸ್ಥಾಪಿಸಲ್ಪಟ್ಟು ಲಂಡನ್ ವಿಶ್ವವಿದ್ಯಾಲಯದ ಮಾದರಿಯಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿತು.

	ಖಾಸಗಿ ಸಂಸ್ಥೆ ಹಾಗೂ ವ್ಯಕ್ತಿಗಳು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುತುವರ್ಜಿ ವಹಿಸತೊಡಗಿದಾಗ ಬ್ರಿಟಿಷ್ ಸರ್ಕಾರದ ಕಣ್ಣು ತರೆಯಿತು. 9 ಜುಲೈ 1854ರ ಸರ್ ಚಾಲ್ರ್ಸ್ ವುಡ್ಸ್‍ರ ಶೈಕ್ಷಣಿಕ ಸರ್ಕಾರಿ ಪತ್ರ ಭಾರತದಲ್ಲಿ ಆಧುನಿಕ ಸನ್ನದನ್ನು ನವೀಕರಿಸುವ ಸಂದರ್ಭದಲ್ಲಿ (1853) ಇಂಗ್ಲೆಂಡಿನ ಹೌಸ್ ಆಫ್ ಕಾಮನ್ಸ್ ಸಭೆ ಭಾರತದ ಶಿಕ್ಷಣಾಭಿವೃದ್ಧಿ ಕುರಿತು, ಪರ್ಯಾಲೋಚಿಸಲು ಆಯ್ಕೆ ಸಮಿತಿಯೊಂದನ್ನು ನೇಮಿಸಿತು.

	ಆಯ್ಕೆ ಸಮಿತಿ ತನ್ನ ವರದಿಯನ್ನು ನಿರ್ದೇಶಕ ಮಂಡಳಿಗೆ ಸಲ್ಲಿಸಿತು. ಸರ್ ಚಾಲ್ರ್ಸ್ ವುಡ್ಸ್, ಮಂಡಳಿ ವರದಿಯನ್ನು ಭಾರತದ ಇಂಗ್ಲಿಷ್ ಶಿಕ್ಷಣದ ಮಹಾಧಿಕಾರ ಪತ್ರ ಎಂದು ಕರೆದು 1854ರಲ್ಲಿ ಜಾರಿಗೊಳಿಸಿತು.

	ವುಡ್ಸ್‍ರವರ ಸರ್ಕಾರಿ ಪತ್ರ ಮುಂದಿಟ್ಟ ಅನೇಕ ಶಿಫಾರಸ್ಸುಗಳಲ್ಲಿ ಸಾರ್ವಜನಿಕ ಬೋಧನಾ ವಿಭಾಗ ತೆರೆಯಬೇಕು ಹಾಗೂ ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಬೇಕು ಎಂಬ ಎರಡು ಮಹತ್ತರ ಅಂಶಗಳು ಒಳಗೊಂಡಿದ್ದವು. ಅವರ ಫಲವಾಗಿ ಸರ್ಕಾರ ಕಲಕತ್ತ, ಮುಂಬಯಿ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಸರ್ ಜೇಮ್ಸ್ ಕೋಲ್‍ವಿಲ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು.

	ಸಮಿತಿಯ ನಿರ್ಣಯಗಳನ್ನು ಪರ್ಯಾಲೋಚಿಸಿ ಸರ್ಕಾರ 12-12-1856ರಂದು ಶಾಸನ ಪರಿಷತ್ತಿನಲ್ಲಿ ಮುಂಬಯಿ ವಿಶ್ವವಿದ್ಯಾಲಯ ಸ್ಥಾಪಿಸುವ ಕಾಯ್ದೆಯನ್ನು ಅಂಗೀಕರಿಸಿತು.

	ಶೈಕ್ಷಣಿಕರಂಗದಲ್ಲಿ ಆಧುನಿಕಪದ್ಧತಿಯ ಮೂರು ವಿಶ್ವವಿದ್ಯಾಲಯಗಳು ಸ್ಥಾಪಿಸಲ್ಪಟ್ಟವು. 24 ಜನವರಿ 1857ರಂದು ಕಲ್ಕತ್ತ, 18 ಜುಲೈ 1857 ರಂದು ಮುಂಬಯಿ ಹಾಗೂ 5 ಸೆಪ್ಟೆಂಬರ್ 1857ರಂದು ಮದರಾಸು ವಿಶ್ವವಿದ್ಯಾಲಯಗಳ ಅಸ್ತಿತ್ವಕ್ಕೆ ಬಂದು ದೇಶದ ಶಿಕ್ಷಣರಂಗದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಅಸ್ತಿತ್ವದ ದೃಷ್ಟಿಯಿಂದ ಆಗಸ್ಟ್ 88ರ ತನಕ ಭಾರತದಲ್ಲಿ ಕಾರ್ಯನಿರತವಾದ 157 ವಿಶ್ವವಿದ್ಯಾಲಯಗಳ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಗಳ ಪೈಕಿ ಮುಂಬಾಯಿ ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನವಿದೆ.

	ವಿಶ್ವವಿದ್ಯಾಲಯ ಸ್ಥಾಪನೆಯೊಡನೆ ಜಾನ್ ಲಾರ್ಡ್ ಎಲ್‍ಫಿನ್‍ಸ್ಟನರ್ ಮುಂಬಯಿ ವಿಶ್ವವಿದ್ಯಾಲಯದ ಮೊತ್ತಮೊದಲ ಕುಲಾಧಿಪತಿ ಹಾಗೂ ಸರ್ ವಿಲಿಯಮ್ ಯಾಡ್ರ್ಲೆ ಮೊದಲ ಕುಲಪತಿಗಳಾದರು. 1890-92ರ ತನಕ ಇಂಗ್ಲಿಷ್ ಕವಿ ವಿಲಿಯಮ್ ವಡ್ರ್ಸ್‍ವರ್ತರು ಕುಲಪತಿಗಳಾದರು. 126 ವರ್ಷಗಳ ಬಳಿಕ 1984ರಲ್ಲಿ ಲಿಮಯೆ ಅವರ ನೇಮಕಾತಿಯೊಡನೆ ಮೊದಲು ಉಪಕುಲಪತಿ ಪದವಿಯನ್ನು ತುಂಬಲಾಯಿತು.

	ರಾಬರ್ಟ್ ಎಸ್ ಸಿನ್‍ಕ್ಲೇರ್ ವಿಶ್ವವಿದ್ಯಾಲಯದ ಮೊದಲ ಕುಲಸಚಿವ ಹಾಗೂ ಎಸ್.ಆರ್. ಡೊಂಗರಕೇರಿ ವಿಶ್ವವಿದ್ಯಾಲಯದ ಮೊದಲ ನಿಯಾವಕರು (ರೆಕ್ಟರ್).

	1956ರಲ್ಲಿ ರಾಜ್ಯ ಪುನಾರಚನೆಯ ಬಳಿಕ ಬಂದ ಹೊಸ ಕಾಯ್ದೆ ಅನ್ವಯ ಆಯಾ ರಾಜ್ಯದ ರಾಜ್ಯಪಾಲರು ವಿಶ್ವವಿದ್ಯಾಲಯದ ಕುಲಾಧಿಪತಿ ಎನಿಸುತ್ತಾರೆ. 1989ರ ಮಧ್ಯದಿಂದ ಮಹಾರಾಷ್ಟ್ರದ ರಾಜ್ಯಪಾಲರಾದ ಶಂಕರ ದಯಾಳ ಶರ್ಮಾ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಮೇ 86 ರಿಂದ ಜಿ. ಎಸ್. ಅಭ್ಯಂತರರು ಉಪಕುಲಪತಿಗಳಾಗಿಯೂ ಏಪ್ರಿಲ್ 86 ರಿಂದ ಜಿ. ಎಸ್. ಅಭ್ಯಂತರರು ಉಪ ಕುಲಪತಿಗಳಾಗಿಯೂ ಇರುವರು. ಜಿ. ಎಂ. ರಾಜರ್ಷಿ ಕುಲಸಚಿವ ಹಾಗೂ ಎ. ಸಿ. ಟಿಕೇಶರ್ ಗ್ರಂಥಪಾಲರಾಗಿರುವರು.

	ಕಾರ್ಯಕ್ಷೇತ್ರ: ಪ್ರಾರಂಭದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದ ಈಗಿನ ಮಹಾರಾಷ್ಟ್ರ, ಗುಜರಾತ ಹಾಗೂ ಕರ್ನಾಟಕದ ನಾಲ್ಕು ಜಿಲ್ಲೆಗಳು (ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಬಿಜಾಪುರ) ಒಳಪಟ್ಟಿದ್ದವು. ಕೆಲವು ವರ್ಷಗಳ ಬಳಿಕ ಸಿಂಧ್ ಸಂಸ್ಥಾನವೂ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗೆ ಬಂತು. 1986ರಲ್ಲಿ ಮಹಾರಾಷ್ಟ್ರ ರಾಜ್ಯದ ಬೃಹತ್ ಮುಂಬಯಿ ಜಿಲ್ಲೆಯ ಹೊರತಾಗಿ, ಠಾಣೆ, ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳು ಒಳಪಟ್ಟಿದ್ದವು. 1986ಕ್ಕಿಂತ ಮೊದಲು ಕೇಂದ್ರ ಶಾಸಿತ ಪ್ರದೇಶ ಗೋವೆಯೂ (ದಮನ್ ಮತ್ತು ದೀವ್ ಅನ್ನು ಹೊರತುಪಡಿಸಿ.) ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿತ್ತು.

	ಕಾರ್ಯಾರಂಭ: ವಿಶ್ವವಿದ್ಯಾಲಯದ ಸ್ಥಾಪನೆಯಾದ 17 ವರ್ಷಗಳ ತನಕ ಸ್ವಂತ ಕಟ್ಟಡವಿರಲಿಲ್ಲ. ಮುಂಬಯಿಯ ಫೋರ್ಟ್ ಕ್ಷೇತ್ರದಲ್ಲಿದ್ದ ಟೌನ್‍ಹಾಲ್ ಕಟ್ಟಡದಲ್ಲಿ ಕಾರ್ಯವೆಸಗುತ್ತಿತ್ತು. ಇಲ್ಲೇ ಸೆನೆಟ್ ಹಾಗೂ ಸಿಂಡಿಕೇಟ್ ಸಭೆಗಳು ಮತ್ತು ಘಟಿಕೋತ್ಸವ ಸಮಾರಂಭಗಳು ಜರುಗುತ್ತಿದ್ದವು. ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕಟ್ಟಡದ ಅಗತ್ಯ ಮನಗಂಡ ಕಾವಸ್ ಜೀ ಜಹಾಂಗೀರ್ ರೆಡಿಮನಿ ಎಂಬವರು ವಿಶ್ವವಿದ್ಯಾಲಯದ ಸ್ವಂತ ಕಟ್ಟಡಕ್ಕಾಗಿ 1863ರಲ್ಲಿ ರೂ. 1ಲಕ್ಷ ದಾನವಿತ್ತರು. ಪೋರ್ಟ್ ಕ್ಷೇತ್ರದ ಪ್ಲೋರಾ ಫೌಂಟೇನಿನ ಹತ್ತಿರದಲ್ಲಿ ಸರ್ ಕಾವಸ್ ಜೀ ಜಹಾಂಗೀರ್ ಹಾಲ್ ಎಂಬ ಹೆಸರಿನ ವಿಶ್ವವಿದ್ಯಾಲಯದ ಮೊತ್ತಮೊದಲ ಕಟ್ಟಡದ ಕೆಲಸ 1868ರಲ್ಲಿ ಪ್ರಾರಂಭವಾಗಿ 1874ರಲ್ಲಿ ಮುಗಿಯಿತು. ಈ ಸುಂದರ ಕಟ್ಟಡದ ಉದ್ದ 150 ಅಡಿ ಅಗಲ 65 ಅಡಿ ಹಾಗೂ ಎತ್ತರ 90 ಅಡಿ. ಘಟಿಕೋತ್ಸವ ಹಾಗೂ ಸೆನಟ್ ಸಿಂಡಿಕೇಟ್ ಕಾರ್ಯಕಲಾಪಗಳು ನಡೆಯುವುದು ಇಲ್ಲಿಯೇ.

	ಪ್ರೇಮಚಂದ ರಾಯಚಂದ ಎಂಬ ವಾಣಿಜ್ಯೋದ್ಯಮಿ 1904ರಲ್ಲಿ ವಿಶ್ವವಿದ್ಯಾಲಯದ ಗ್ರಂಥಾಲಯ ಹಾಗೂ ಕಟ್ಟಡಕ್ಕಾಗಿ ರೂ 2ಲಕ್ಷದ ದೊಡ್ಡ ದೇಣಿಗೆಯಿತ್ತರು. ಎರಡೂ ತಿಂಗಳ ಬಳಿಕ ಅವರು ಮತ್ತೊಮ್ಮೆ ತಮ್ಮ ತಾಯಿ ಶ್ರೀಮತಿ ರಾಜಾಬಾಯಿಯವರ ನೆನಪಿನಲ್ಲಿ ರೂ 2 ಲಕ್ಷದ ದೇಣಿಗೆಯನ್ನು ಗ್ರಂಥಾಲಯದ ಗಡಿಯಾರ ಗೋಪುರದ ನಿರ್ಮಾಣಕ್ಕಾಗಿ ಇತ್ತರು.

	1878ರಲ್ಲಿ ಗ್ರಂಥಾಲಯ ಕಟ್ಟಡ ಹಾಗೂ ಗಾಥಿಕ್ ಶೈಲಿಯಲ್ಲಿ ಭವ್ಯವೂ ಉನ್ನತವೂ ಆದ ರಾಜಾಬಾಯಿ ಗಡಿಯಾರ ಗೋಪುರ ತಲೆ ಎತ್ತಿತ್ತು. ವಾಸ್ತುಶಿಲ್ಪಿ ಗಿಲ್ಬರ್ಟ್ ಸ್ಕಾಟ್ ಅವರ ನೇತೃತ್ವದಲ್ಲಿ ತಯಾರಾದ ಈ ಗೋಪುರದ ಒಟ್ಟು ಎತ್ತರ 280 ಅಡಿ. ಇದು ದೇಶದ ಅತಿ ಎತ್ತರವಾದ ಹಾಗೂ ಆಕರ್ಷಕವಾದ ಕಟ್ಟಡಗಳಲ್ಲಿ ಒಂದಾಗಿದೆ.

	ರಾಜಾಬಾಯಿ ಗೋಪುರದ ಕೆಳಭಾಗದಲ್ಲಿ ಹೋಮರ್, ಷೇಕ್ಸ್‍ಪಿಯರ್ ಮೊದಲಾದ ಸಾಹಿತ್ಯಸಾಮ್ರಾಟರ ಮುಖಾಕೃತಿಗಳನ್ನೂ ಕುಸುರಿ ಕಲೆಯನ್ನೂ ಕಾಣಬಹುದು. ಗೋಪುರದ ಮೊದಲ ಹಂತದ ಎತ್ತರ 64 ಅಡಿ. ಇದು ಚಚ್ಚೌಕಾರದಲ್ಲಿದೆ. ಎರಡನೆಯ ಹಂತದ ಎತ್ತರ 118 ಅಡಿ. ಮೂರನೆಯ ಹಂತದ ಎತ್ತರ 94 ಅಡಿ ಕೊನೆಯ ಎರಡೂ ಹಂತಗಳು ಅಷ್ಟಭುಚಾಕೃತಿಯಲ್ಲಿವೆ. ಮೂರನೆಯ ಹಂತದಲ್ಲಿ ನಾಲ್ಕು ಮಗ್ಗಾಲುಗಳಲ್ಲಿ ನಾಲ್ಕು ದೊಡ್ಡ ಗಡಿಯಾರಗಳಿವೆ. ಪ್ರತಿಯೊಂದರೆ ವ್ಯಾಸ 12 1/2 ಅಡಿ. ಕಟ್ಟಡದ ಬೃಹದಾಕಾರದ ಕಿಟಕಿಗಳಿಗೆ ಬಣ್ಣ ಬಣ್ಣದ ಕನ್ನಡಿಗಳನ್ನು ಜೋಡಿಸಲಾಗಿದೆ. ವಿಶಾಲ ಗ್ರಂಥಾಲಯದೊಳಗಿನ ರಚನೆ ಹಾಗೂ ಶಿಲ್ಪ ಶೈಲಿ ವಿಶೇಷ ಆಕರ್ಷಕವಾಗಿದೆ. ಒಳಗೆ ವಿಶ್ವವಿದ್ಯಾಲಯದ ಖ್ಯಾತ ಕುಲಾಧಿಪತಿ ಮತ್ತು ಕುಲಪತಿಗಳ ಭವ್ಯವಾದ ವಿಗ್ರಹಗಳು ಇವೆ. 1880ರಂದು ಗ್ರಂಥಾಲಯವನ್ನು ತೆರೆಯಲಾಯಿತು.

	1934ರಲ್ಲಿ ಮಾತುಂಗಾದಲ್ಲಿ ವಿಶ್ವವಿದ್ಯಾಲಯದ ರಸಾಯನ ತಾಂತ್ರಿಕವಿಜ್ಞಾನ ವಿಭಾಗಕ್ಕಾಗಿ ಸುಂದರವಾದ ಕಟ್ಟಡವನ್ನು ಕಟ್ಟಲಾಯಿತು. ಅದೇ ವರ್ಷ ವಿಭಾಗವೂ ಪ್ರಾರಂಭವಾಯಿತು.

	ವಿಶ್ವವಿದ್ಯಾಲಯದ ಹೆಚ್ಚಿನ ಕಾರ್ಯಕಲಾಪಗಳು ಪೋರ್ಟ್ ಸಂಕೀರ್ಣದಲ್ಲಿ (ಕಾಂಪ್ಲೆಕ್ಸ್) ನಡೆಯುತ್ತಿದ್ದವು. ಹೆಚ್ಚುತ್ತಿದ್ದ ಚಟುವಟಿಕೆ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಗಾಗಿ ಇನ್ನೊಂದು ಸಂಕುಲದ ಆವಶ್ಯಕತೆ ಕಂಡದ್ದರಿಂದ 1966ರಲ್ಲಿ ಉತ್ತರ ಮುಂಬಯಿ ಪ್ರದೇಶದ ಕಲೀನಾ ಎಂಬಲ್ಲಿ 231 ಎಕರೆ ಸ್ಥಳದಲ್ಲಿ ವಿಶ್ವವಿದ್ಯಾಲಯದ ವಿದ್ಯಾನಗರಿ ಆವರಣದ ಆಯೋಗ ಒಂದು ಕೋಟಿ ರೂಪಾಯಿ ಅನುದಾನ ನೀಡಿತು.

	ಇಂದು ನ್ಯಾಯಶಾಸ್ತ್ರ ವಿಭಾಗವೊಂದನ್ನುಳಿದು ಪೋರ್ಟ್ ಆವರಣದ ಎಲ್ಲ ಶೈಕ್ಷಣಿಕ ವಿಭಾಗಗಳು ವಿದ್ಯಾನಗರಿ ಆವರಣದಲ್ಲಿ ಕಾರ್ಯನಿರತವಾಗಿವೆ. ಆಡಳಿತ ಕಛೇರಿ ಮಾತ್ರ ಪೋರ್ಟ್‍ಲ್ಲಿದೆ. ಹೊಸ ಆವರಣದಲ್ಲಿ ಜವಾಹರಲಾಲ್ ನೆಹರು ಗ್ರಂಥಾಲಯ ಎಂಬ ಪ್ರತ್ಯೇಕ ಗ್ರಂಥಾಲಯವನ್ನೂ 1976ರಲ್ಲಿ ಪ್ರಾರಂಭಿಸಲಾಯಿತು.

	ವಿಶ್ವವಿದ್ಯಾಲಯದ ಕ್ರೀಡಾಂಗಣ ಮರೀನ್ ಲೈನ್ಸ್‍ನಲ್ಲಿದೆ. ಪತ್ರಾಚಾರ ಪಾಠ್ಯಕ್ರಮ ವಿಭಾಗ ಹಾಗೂ ಜಮನಾಲಾಲ್ ಬಜಾಜ್ ವ್ಯವಸ್ಥಾಪನಾ (ಮ್ಯಾನೇಜ್ ಮೆಂಟ್) ಸಂಸ್ಥೆ ಚರ್ಚ್‍ಗೇಟ್‍ನಲ್ಲಿದೆ.

	ವಿಶ್ವವಿದ್ಯಾಲಯ ಪ್ರಾರಂಭವಾದಾಗ ಇದ್ದ ವಿಭಾಗಗಳ ಸಂಖ್ಯೆ ನಾಲ್ಕು: ಕಲೆ, ನ್ಯಾಯ, ವೈದ್ಯಕೀಯ ಮತ್ತು ಎಂಜಿನಿಯರಿಂಗ್, ವಿಜ್ಞಾನವನ್ನು ಕಲೆಯ ಅಡಿಯಲ್ಲೇ ಅಳವಡಿಸಲಾಗಿತ್ತು. ಪ್ರಾರಂಭದಲ್ಲಿ ಬಿ. ಎ. ಪದವಿ ಮೂರು ವರ್ಷದಾಗಿತ್ತು. ಅದರಲ್ಲಿದ್ದ ವಿಷಯಗಳು ಆರು-ಭಾಷೆ (ಇಂಗ್ಲಿಷ್), ಗಣಿತ, ಪ್ರಕೃತಿ ವಿಜ್ಞಾನ, ಇತಿಹಾಸ, ತರ್ಕಶಾಸ್ತ್ರ ಹಾಗೂ ನೀತಿ ತತ್ವಶಾಸ್ತ್ರ (ಮಾರಲ್ ಫಿಲಾಸಫಿ).

	ವಿಶ್ವವಿದ್ಯಾಲಯ 1859ರಿಂದ 1949ರ ತನಕ ಮೆಟ್ರಿಕ್ಯುಲೇಷನ್ ಪರೀಕ್ಷೆ ನಡೆಸುತ್ತಿತ್ತು. 1859ರಲ್ಲಿ ನಡೆದ ಮೊಟ್ಟಮೊದಲ ಮೆಟ್ರಿಕ್ ಪರೀಕ್ಷೆಯಲ್ಲಿ 133 ಅಭ್ಯರ್ಥಿಗಳು ಇದ್ದು ಅವರಲ್ಲಿ 22 ಮಂದಿ ಉತ್ತೀರ್ಣರಾದರು.

	ಮೊದಲ ಸ್ನಾತಕರು: ವಿಶ್ವವಿದ್ಯಾಲಯದ ಕಕ್ಷೆಯಲ್ಲಿ ನಡೆದ ಮೊತ್ತಮೊದಲ ಪರೀಕ್ಷೆ ಬಿ. ಎ. ಮೂರು ವರ್ಷದ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸ್ನಾತಕಪದವಿ ಪಡೆದ ಮೊತ್ತ ಮೊದಲೆನೆಯವರು ಮಹಾದೇವ ಗೋವಿಂದ ರಾನಡೆ (ಮುಂದೆ ನ್ಯಾಯಮೂರ್ತಿ ರಾನಡೆ ಎಂದು ಪ್ರಸಿದ್ಧರು). ರಾಮಕೃಷ್ಣ, ಗೋಪಾಲ ಭಂಡಾರಕರ, ಬಾಲಮಂಗೇಶ ವಾಗಳೆ ಹಾಗೂ ವಾಮನ ಅಬಾಜಿ ಮೋಡಕ ಎಂಬುವರು. ಇವರು 1860ರಲ್ಲಿ ಬಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1862ರಲ್ಲಿ ಜರುಗಿದ ಪ್ರಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಸ್ವೀಕರಿಸಿದರು.

	ಆರಂಭದಿಂದ 1904ರ ತನಕ ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದ ಪಾಠ್ಯಕ್ರಮಗಳನ್ನು ತಯಾರಿಸುವುದು ಹಾಗೂ ತತ್ಸಂಬಂಧಿತ ಪರೀಕ್ಷೆಗಳನ್ನು ಜರುಗಿಸುವುದಾಗಿತ್ತು. 1904ರಿಂದ ಸ್ನಾತಕೋತ್ತರ ಅಧ್ಯಾಪನ ಕಾರ್ಯ ವಿಶ್ವವಿದ್ಯಾಲಯದ ನಿಯಂತ್ರಣಕ್ಕೆ ಸೇರಿತು. 1928ರ ಅಧಿನಿಯಮದ ಪ್ರಕಾರ ಕಾಲೇಜು ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಸೇರಿತು. 1928ರ ಅಧಿನಿಯಮದ ಪ್ರಕಾರ ಕಾಲೇಜು ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಮಾನ್ಯತೆ ಕೊಡಲಾಯಿತಲ್ಲದೆ ಸ್ನಾತಕೋತ್ತರ ಅಧ್ಯಾಪನ ಮತ್ತು ಸಂಶೋಧನೆ ನೇರವಾಗಿ ವಿಶ್ವವಿದ್ಯಾಲಯದ ನಿಯಂತ್ರಣಕ್ಕೆ ಒಳಪಟ್ಟಿತು.

	1953ರ ತನಕ ಕಾಲೇಜುಗಳೆಲ್ಲ ವಿಶ್ವವಿದ್ಯಾಲಯಕ್ಕೆ ಸಂಬದ್ಧಗೊಂಡಿದ್ದವು (ಅಫಿಲಿಯೇಟ್). 1953ರ ಅಧಿನಿಯಮದನ್ವಯ ಅಧ್ಯಾಪನ ಹಾಗೂ ಸಂಘೀಯ (ಟೀಚಿಂಗ್ ಅಂಡ್ ಫೆಡರಲ್) ಚಟುವಟಿಕೆಗಳು ಪುನಾರಚಿತಗೊಂಡವು. ಪರಿಣಾಮವಾಗಿ ಎಲ್ಲ ಸಂಬದ್ಧ ಕಾಲೇಜುಗಳು ಅಂಗೀಕೃತ ಕಾಲೇಜುಗಳಾದವು. ಅಲ್ಲದೆ ಇಂಟರ್‍ಮೀಡಿಯೇಟ್ ಅನಂತರದ ಅಧ್ಯಾಪನವನ್ನು ವಿಶ್ವವಿದ್ಯಾಲಯ ತನ್ನ ನಿಯಂತ್ರಣದೊಳಗೆ ಸೇರಿತು. ಪೂರ್ವ ಸ್ನಾತಕ ಅಧ್ಯಾಪನ ಹಾಗೂ ಪರೀಕ್ಷೆಗಳ ಹೊಣೆಯನ್ನು ಕಾಲೇಜುಗಳಿಗೆ ಬಿಟ್ಟುಕೊಡಲಾಯಿತು.

	1974ರ ಮೇ ತಿಂಗಳಲ್ಲಿ ಹಳೆದು ಅಧಿನಿಯಮಗಳನ್ನೆಲ್ಲ ನಿರಸ್ತಗೊಳಿಸಿ ಮಹಾರಾಷ್ಟ್ರ ಸರ್ಕಾರದ 1974ರ ಅಧಿನಿಯಮವನ್ನು ಜಾರಿಗೊಳಿಸಲಾಯಿತು.

	ಮೊದಲ 26 ವರ್ಷಗಳ ತನಕ ವಿಶ್ವವಿದ್ಯಾಲಯಲದಲ್ಲಿ ಸ್ತ್ರೀ ಶಿಕ್ಷಣಕ್ಕೆ ಅವಕಾಶವಿರಲಿಲ್ಲ. 1883ರಲ್ಲಿ ಎಲ್ಲ ಪದವಿ ಪರೀಕ್ಷೆಗಳ ಬಾಗಿಲನ್ನು ಸ್ತ್ರೀಯರಿಗಾಗಿ ತೆರೆಯಲಾಯಿತು. 1888ರಲ್ಲಿ ಕುಮಾರಿ ಕೊರ್ನೆಲಿಯಾ ಸೋರಬ್‍ಜಿ ಎಂಬವರು ವಿಶ್ವವಿದ್ಯಾಲಯದಿಂದ ಮೊತ್ತಮೊದಲ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹೊರಬಂದರು.

	1947ರಲ್ಲಿ ನೇಮಕಹೊಂದಿದ ಎಸ್. ವೆಂಕಟರಾಮಮೂರ್ತಿ ಅವರು ವಿಶ್ವವಿದ್ಯಾಲಯದ ಮೊದಲ ಭಾರತೀಯ ಕುಲಾಧಿಪತಿಗಳು. 1892ರಲ್ಲಿ ನೇಮಕ ಹೊಂದಿದ ನ್ಯಾಯಮೂರ್ತಿ ಕಾಶೀನಾಥ ತ್ರ್ಯಂಬಕ ತೇಲಂಗರು ವಿಶ್ವವಿದ್ಯಾಲಯದ ಮೊದಲ ಭಾರತೀಯ ಕುಲಪತಿಗಳು ಹಾಗೂ 1962ರಲ್ಲಿ ನೇಮಕಹೊಂದಿದ ಬಿ.ಎಂ. ಪಂಡಿತರು ಮೊದಲ ಭಾರತೀಯ ಕುಲಸಚಿವರು. 1986ರಲ್ಲಿ ನೇಮಕಹೊಂದಿದ ಮೆಹರೂ ಡಿ. ಬೆಂಗಾಲಿ ಅವರು ಮೊತ್ತಮೊದಲ ಮಹಿಳಾ ಉಪಕುಲಪತಿಗಳು.

	1881ರಲ್ಲಿ ಮೊತ್ತಮೊದಲಾಗಿ ವಿಜ್ಞಾನ ಪದವಿ ಪ್ರಾರಂಭಿಸಿತು. 1904ರ ಭಾರತೀಯ ವಿಶ್ವವಿದ್ಯಾಲಯ ಕಾಯ್ದೆಯ ಪ್ರಕಾರ ವಿಶ್ವವಿದ್ಯಾಲಯವೇ ತರಗತಿಗಳನ್ನು ನಡೆಸುವ ಪದ್ಧತಿ ಜಾರಿಗೆ ಬಂತು. ಅದೇ ವರ್ಷ ಅರ್ಥಶಾಸ್ತ್ರ ವಿಭಾಗವನ್ನು ಸ್ಥಾಪಿಸಿತು. 1913ರಲ್ಲಿ ಏಷ್ಯಾದ ಮೊತ್ತಮೊದಲ ವಾಣಿಜ್ಯ ಕಾಲೇಜು-ಗವರ್ನ್‍ಮೆಂಟ್ ಕಾಲೇಜ್ ಆಫ್ ಕಾಮರ್ಸ್ ಸ್ಥಾಪಿಸಲ್ಪಟ್ಟಿತು. ಮುಂದೆ ಈ ಕಾಲೇಜು ಲಾರ್ಡ್ ಸಿಡನ್‍ಹ್ಯಾಮ್ ಸ್ಮಾರಕ ಸಮಿತಿಯ ದೇಣಿಗೆಯಿಂದ ಸಿಡನ್‍ಹ್ಯಾಮ್ ಕಾಲೇಜು ಎಂದು ಪ್ರಸಿದ್ಧಿ ಪಡೆಯಿತು. 

	ಆರಂಭದಿಂದ ವಿಶ್ವವಿದ್ಯಾಲಯದ ಕಲಿಕೆಯ ಮಾಧ್ಯಮ ಇಂಗ್ಲಿಷ್ ಆಗಿದ್ದರೂ ಸಂಸ್ಕøತ ಮತ್ತು ಪರ್ಶಿಯನ್ ಭಾಷೆಗಳಲ್ಲಿ ಒಂದನ್ನು ವಿಷಯವನ್ನಾಗಿ ಆರಿಸುವ ಅವಕಾಶ ಮೊದಲಿನಿಂದಲೂ ಇತ್ತು. 1900 ರಿಂದ ಮರಾಠಿ. ಗುಜರಾತಿ ಹಾಗೂ ಕನ್ನಡಗಳನ್ನು ಎಂ.ಎ. ಮಟ್ಟದಲ್ಲಿ ಅಭ್ಯಸಿಸುವ ಅವಕಾಶ ಕಲ್ಪಿಸಲಾಯಿತು. 1937ರಲ್ಲಿ ಕದಲು ಪದ್ಧತಿಯ ಅಡಿಯಲ್ಲಿ ಕಲೆ ಹಾಗೂ ವಿಜ್ಞಾನಗಳ ಮೊದಲ ವರ್ಷ ಮತ್ತು ಇಂಟರ್‍ಮೀಡಿಯೆಟ್ ವರ್ಷಗಳಲ್ಲಿ ಭಾರತೀಯ ಭಾಷೆಗಳನ್ನು ಪರಿಚಯಿಸಲಾಯಿತು. 1937ರಿಂದ ವಿದ್ಯಾರ್ಥಿಗಳು ಕಾಲೇಜು ಮಟ್ಟಕ್ಕೆ ಸೇರಿದಾಕ್ಷಣವೇ ವಿಜ್ಞಾನ ವಿಭಾಗವನ್ನು ಆರಿಸುವ ಅವಕಾಶ ಕಲ್ಪಿಸಲಾಯಿತು. 1938ರಿಂದ ವಾಣಿಜ್ಯ ವಿಭಾಗಕ್ಕೂ ಈ ಸವಲತ್ತನ್ನು ನೀಡಲಾಯಿತು.

	1884ರಿಂದ ಎಲ್‍ಎಲ್.ಡಿ. ಮತ್ತು ಡಿ.ಲಿಟ್‍ನ ಗೌರವ ಪದವಿಯನ್ನು ನೀಡುವ ಪರಂಪರೆ ಪ್ರಾರಂಭವಾಯಿತು. ಆ ವರ್ಷ ಭಾರತದ ವೈಸ್ ರಾಯರಾದ ಮಾಕ್ರ್ವಿಸ್ ಆಫ್ ರಿಪನ್‍ರಿಗೆ ಎಲ್.ಎಲ್.ಡಿ ಪ್ರಶಸ್ತಿ ನೀಡಲಾಯಿತು. 1914-15ರಿಂದ ಸಂಶೋಧನಾ ಅಧ್ಯಯನವನ್ನು (ಪಿಎಚ್.ಡಿ.) ಪ್ರಾರಂಭಿಸಲಾಯಿತು.

	1953ರಿಂದ ವಿಶ್ವವಿದ್ಯಾಯಲ ಕಾಲೇಜುಗಳಿಗೆ ಮಾನ್ಯತೆ ಕೊಡಲಾರಂಭಿಸಿತು. ಈ ರೀತಿ ಮಾನ್ಯತೆ ಪಡೆದ ಮೊತ್ತಮೊದಲ ಕಾಲೇಜುಗಳೆಂದರೆ ಎಲ್‍ಫಿನಸ್ಟನ್ ಕಾಲೇಜು (ಸ್ಥಾಪನೆ 1825), ಗ್ರಾಂಟ್ ಮೆಡಿಕಲ್ ಕಾಲೇಜು (1845). ಗವರ್ನ್‍ಮೆಂಟ್ ಲಾ ಸ್ಕೂಲ್ (1855) ಮತ್ತು ಪೂನಾ ಕಾಲೇಜು. ಪುಣೆ (1821).

	1963ರಿಂದ ಸ್ನಾತಕೋತ್ತರ ವರ್ಗಗಳ ಪ್ರವೇಶವನ್ನು ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗೆ ಸೇರಿಸಲಾಯಿತು. 1966ರಲ್ಲಿ ಗೋವಾದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸಿತು. 1969ರಲ್ಲಿ ಇಂಗ್ಲಿಷಿನ ಜೊತೆಗೆ ಮರಾಠಿ. ಗುಜರಾತಿ ಹಾಗೂ ಹಿಂದಿಯನ್ನು ಕಲಿಕೆಯ ಮಾಧ್ಯಮವಾಗಿ ಸ್ವೀಕರಿಸಲಾಯಿತು. 1970ರಿಂದ ಪತ್ರಾಚಾರ ಪಠ್ಯಕ್ರಮ ಪ್ರಾರಂಭವಾಯಿತು. 1957ರಲ್ಲಿ ವಿಶ್ವವಿದ್ಯಾಲಯದ ಶತಮಾನೋತ್ಸವವನ್ನು ಆಚರಿಸಲಾಯಿತು. ಆಗ ವಿಶ್ವವಿದ್ಯಾಲಯದ ಅಡಿಯಲ್ಲಿ 14 ಕಲಾ ಮತ್ತು ವಿಜ್ಞಾನ ಕಾಲೇಜುಗಳು, 3 ವಾಣಿಜ್ಯ, 3 ವೈದ್ಯಕೀಯ, 2 ದಂತವಿಜ್ಞಾನ, 3 ನ್ಯಾಯಶಾಸ್ತ್ರ. 1 ಎಂಜಿನಿಯರಿಂಗ್, 1 ಪ್ರಾಣಿ ವಿಜ್ಞಾನ, 1 ವಾಸ್ತು ಶಿಲ್ಪ ಹಾಗೂ 2 ಶಿಕ್ಷಕರ ತರಬೇತಿ ಕಾಲೇಜುಗಳಿದ್ದುವು. 1980ರಲ್ಲಿ ಗ್ರಂಥಾಲಯದ ಶತಮಾನೋತ್ಸವವನ್ನು ಆಚರಿಸಲಾಯಿತು. ಪ್ರಸ್ತುತ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳನ್ನು ಕಲೆ, ವಿಜ್ಞಾನ, ವಾಣಿಜ್ಯ, ನ್ಯಾಯಶಾಸ್ತ್ರ, ತಾಂತ್ರಿಕ ವಿಜ್ಞಾನ. ದಂತ ವಿಜ್ಞಾನ, ವೈದ್ಯಕೀಯ ವಿಜ್ಞಾನ ಹಾಗೂ ಆಯುರ್ವೇದ ಚಿಕಿತ್ಸಾ ವಿಜ್ಞಾನ ಎಂಬ ಫ್ಯಾಕಲ್ಟಿಗಳಲ್ಲಿ ಸೇರಿಸಲಾಗಿದೆ.

	ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 1985-86ರಲ್ಲಿ 163 ಅಂಗೀಕೃತ ಹಾಗೂ ಸಂಬದ್ಧ ಕಾಲೇಜುಗಳಿದ್ದವು.

	ಕಲೆ ಮತ್ತು ವಾಣಿಜ್ಯದ ಹೆಚ್ಚಿನ ಕಾಲೇಜುಗಳಲ್ಲಿ ಹಗಲು ತರಗತಿಗಳ ಹೊರತಾಗಿ ನೌಕರಿ ಮಾಡುವವರಿಗಾಗಿ ಬೆಳಗಿನ ತರಗತಿಗಳ ಸೌಲಭ್ಯವಿದೆ. ಕೆಲವಡೆಗಳಲ್ಲಿ ಸಾಯಂಕಾಲದ ತರತಗತಿಗಳಿವೆ. ನ್ಯಾಯಶಾಸ್ತ್ರದ ಎಲ್ಲ ಕಾಲೇಜುಗಳು ಸಂಜೆ ನಡೆಯುತ್ತವೆ.

	ಸಂಶೋಧನಾ ಅಧ್ಯಯನ: ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಅಧ್ಯಯನದ ಅನುಕೂಲತೆಯನ್ನು 1914ರಲ್ಲಿ ಕಲ್ಪಿಸಲಾದರೂ ಭಾರತೀಯ ಭಾಷೆಗಳಲ್ಲಿ ಪಿಎಚ್.ಡಿ. ಮಾಡುವ ಅವಕಾಶ 1927ರಲ್ಲಿ ದೊರಕಿತು ಪುಸ್ತುತದಲ್ಲಿ ಕಲೆ, ಲಲಿತಕಲೆ, ವಿಜ್ಞಾನ, ವಾಣಿಜ್ಯ, ನ್ಯಾಯಶಾಸ್ತ್ರ, ವೈದ್ಯಕೀಯ ವಿಜ್ಞಾನ ತಾಂತ್ರಿಕ ವಿಜ್ಞಾನದಲ್ಲಿ ಪಿಎಚ್.ಡಿ ಮಾಡುವ ಸೌಲಭ್ಯ ಇದೇ.

	1985ರಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ 163 ಕಾಲೇಜುಗಳಲ್ಲಿ ಕಲಿಸುವ ಪ್ರಾಚಾರ್ಯ, ಪ್ರಾಧ್ಯಾಪಕ ಉಪನ್ಯಾಸಕ ಹಾಗೂ ಟ್ಯೂಟರುಗಳ ಒಟ್ಟು ಸಂಖ್ಯೆ 9 ಸಾವಿರ. ವಿಶ್ವವಿದ್ಯಾಲಯದ 30 ವಿಭಾಗ ಹಾಗೂ 5 ಅಧ್ಯಯನ ಕೇಂದ್ರಗಳಲ್ಲಿ ಕಲಿಸುವ ನಿರ್ದೇಶಕ. ಪ್ರಧ್ಯಾಪಕ. ಪ್ರವಾಚಕ, ಉಪನ್ಯಾಸಕ ಹಾಗೂ ಇತರ ಶಿಕ್ಷಕರ ಒಟ್ಟು ಸಂಖ್ಯೆ 350. ಇವರಲ್ಲಿ ಪ್ರಾಧ್ಯಾಪಕರ ಸಂಖ್ಯೆ 80. ಪ್ರವಾಚಕರು 110. ಉಪನ್ಯಾಸಕರು 105 ಹಾಗೂ ಇತರರ ಸಂಖ್ಯೆ 55. ವಿಶ್ವವಿದ್ಯಾಲಯದ ಶಿಕ್ಷಕೇತರ ಸಿಬ್ಬಂದಿಗಳಲ್ಲಿ 390 ತಾಂತ್ರಿಕ, 1350 ತಾಂತ್ರಿಕರಲ್ಲದ 720 ಪ್ರಶಾಸನಿಕ ಹಾಗೂ 650 ಚತುರ್ಥ ಶ್ರೇಣಿ ಸಿಬ್ಬಂದಿಗಳಿದ್ದರು.

	1986ರ ಮಧ್ಯದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 1.53 ಲಕ್ಷ. ಇದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಶೇ. 42. ಇದರಲ್ಲಿ 10 ಪರದೇಶಗಳ 410 ವಿದ್ಯಾರ್ಥಿಗಳೂ ಸೇರಿದ್ದಾರೆ. ಸ್ನಾತಕೋತ್ತರ ವಿದ್ಯಾರ್ಥಿ ಸಂಖ್ಯೆ 13 ಸಾವಿರಕ್ಕಿಂತಲೂ ಹೆಚ್ಚು.

	ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಪಿಎಚ್.ಡಿ. ಮಾಡುತ್ತಿದ್ದವರ ಸಂಖ್ಯೆ 400. 1985-86ರಲ್ಲಿ 450 ವಿದ್ಯಾರ್ಥಿಗಳು ಪಿಎಚ್.ಡಿ. ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ.

	1986ರ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಜರುಗಿದ ವಿವಿಧ ಪ್ರಕಾರದ ಒಟ್ಟು 240ರ ಪರೀಕ್ಷೆಯಲ್ಲಿ ಒಟ್ಟು 1.79 ಲಕ್ಷ ವಿದ್ಯಾರ್ಥಿಗಳು ಕುಳಿತಿದ್ದರು.

	ಗ್ರಂಥಾಲಯ: ವಿಶ್ವವಿದ್ಯಾಲಯ ಪೋರ್ಟ್ ಆವರಣದಲ್ಲಿ ನೆಹರು ಗ್ರಂಥಾಲಯ ಹಾಗೂ ವಿದ್ಯಾನಗರಿ ಆವರಣದಲ್ಲಿ ಜವಾಹರಲಾಲ ನೆಹರು ಗ್ರಂಥಾಲಯ ಎಂಬ ಎರಡು ಗ್ರಂಥಾಲಯಗಳಿವೆ. ಆಡಳಿತ ಹಾಗೂ ಸಂಗ್ರಹದ ದೃಷ್ಟಿಯಿಂದ ದೇಶದ ಅತ್ಯುತ್ತಮ ಗ್ರಂಥಾಲಯಗಳ ಸಾಲಿನಲ್ಲಿ ಇವು ಸ್ಥಾನ ಪಡೆದಿವೆ. ಪೋರ್ಟ್ ಗ್ರಂಥಾಲಯ 1880ರಲ್ಲಿ ಪ್ರಾರಂಭವಾಯಿತು. ನೆಹರು: ಗ್ರಂಥಾಲಯ 1976ರಲ್ಲಿ ಪ್ರಾರಂಭವಾಯಿತು.

	1986ರ ಮಧ್ಯದಲ್ಲಿ ಇವೆರಡೂ ಗ್ರಂಥಾಲಯಗಳಲ್ಲಿ ಒಟ್ಟು 5.40ಲಕ್ಷ ಪುಸ್ತಕಗಳಿದ್ದವು. ಪುಸ್ತಕಗಳಲ್ಲದೆ ಸುಮಾರು ಎರಡು ಲಕ್ಷ ನಿಯತಕಾಲಿಕೆ. ಸಂಪ್ರಬಂಧ, ಮಹಾಪ್ರಬಂಧ ಹಸ್ತಲಿಪಿ, ತಾಳೆಯೋಲೆ ಹಾಗೂ ಮೈಕ್ರೋಫಿಲ್ಮ್‍ಗಳ ದೊಡ್ಡ ಸಂಗ್ರಹವೂ ಇದೆ. ರಿಪ್ರೊಗ್ರಾಫಿಕ್ ಹಾಗೂ ಆಡಿಯೋ-ವಿಜುಯಲ್ ಸೌಲಭ್ಯವೂ ಇದೆ. ಎರಡೂ ಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕಗಳ ಸಂಖ್ಯೆ ಆರೊವರೆ ಸಾವಿರ (1986). ಇವುಗಳ ಪೈಕಿ ಕೆಲವು ಅಪೂರ್ವ ಕನ್ನಡ ಗ್ರಂಥಗಳಿವೆ.

	ಕ್ರೀಡಾರಂಗ: ಮರೀನ್ ಲೈನ್ಸ್‍ನಲ್ಲಿ ವಿಶ್ವವಿದ್ಯಾಲಯದ ಕ್ರೀಡಾಂಗಣ (ಸ್ಟೇಡಿಯಮ್) ಇದೆ. ಇದರಲ್ಲಿ 400 ಮೀ ಉದ್ದದ ಹುಲ್ಲು ಓಡುದಾರಿ (ಗ್ರಾಸಿಟ್ರ್ಯಾಕ್) ಹಾಗೂ 5 ಸಾವಿರ ಮಂದಿ ಕುಳಿತುಕೊಳ್ಳವಂಥ ಗ್ಯಾಲರಿ ಇದೆ. ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್‍ಬಾಲ್, ಕಾಲ್ಚೆಂಡು, ಕೈಚೆಂಡು, ಹಾಕಿ, ಕಬ್ಬಡಿ, ಖೋ-ಖೊ ವಾಲಿಬಾಲ್ ಆಟಗಳ ಸೌಲಭ್ಯ ಇದೆ. ಅಲ್ಲದೆ ಟೇಬಲ್-ಟೆನ್ನಿಸ್, ಬ್ಯಾಡ್‍ಮಿಂಟನ್, ಬಾರುತೋಲನ ಕುಸ್ತಿ ಮೊದಲಾದ ಕ್ರೀಡೆಗಳಿಗೆ ಒಳಾಂಗಣ ಅನುಕೂಲತೆ ಇದೆ.

	ಆಯ-ವ್ಯಯ: 1983-84ರಲ್ಲಿ ವಿಶ್ವವಿದ್ಯಾಲಯದ ಒಟ್ಟು ಅಂದಾಜು ಆಯ ರೂ 10.30 ಕೋಟಿ ಹಾಗೂ ಅಂದಾಜು ವ್ಯಯ ರೂ 10.38 ಕೋಟಿ ಇತ್ತು. ವಿವಿಧ ಬಗೆಯ ಶುಲ್ಕಗಳ ಮೂಲಕ ಸಂಗ್ರಹಿಸಲ್ಪಟ್ಟು ಮೊತ್ತ ರೂ. 1.79 ಕೋಟಿ.

	ವಿಶ್ವವಿದ್ಯಾಲಯದಲ್ಲಿ ಕಾರ್ಯವೆಸಗುವ ಎಲ್ಲ ರೀತಿಯ ವಿದ್ಯಾರ್ಥಿ ಸಂಘಗಳ ನಡುವೆ ಸಮನ್ವಯ ಸ್ಥಾಪಿಸಲು ವಿದ್ಯಾರ್ಥಿ ಪರಿಷತ್ತು ಇದೆ.

	ವಿದ್ಯಾರ್ಥಿ ಕಲ್ಯಾಣ ಯೋಜನೆಯಡಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಕಲಿಯುವ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗಾಗಿ 1979ರಿಂದ ಪುಸ್ತಕ ಬ್ಯಾಂಕ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರಿಗೆ ಸಿಬ್ಬಂದಿಗಳಿಗೆ ಕುಲಪತಿ ನಿಧಿಯಿಂದ ಆರ್ಥಿಕ ನೆರವು ನೀಡುವ ಯೋಜನೆಗಳಿವೆ.

	ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಗಾಗಿ ಮಾತುಂಗಾದ ರಸಾಯನ ತಾಂತ್ರಿಕ ವಿಜ್ಞಾನ ವಿಭಾಗ, ಚರ್ಚ್‍ಗೇಟ್ ಕ್ಷೇತ್ರದಲ್ಲಿರುವ ವಿಶ್ವವಿದ್ಯಾಲಯದ ಕ್ಲಬ್‍ಹೌಸ್ ಹಾಗೂ ವಿದ್ಯಾನಗರಿ ಆವರಣದಲ್ಲಿ ಆರೋಗ್ಯ ಕೇಂದ್ರಗಳಿವೆ. ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ವಿಭಿನ್ನ ಕ್ಷೇತ್ರಗಳಲ್ಲಿ 5 ವಿದ್ಯಾರ್ಥಿನಿಲಯಗಳಿವೆ. ಇವುಗಳಲ್ಲಿ ಒಟ್ಟು 700 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಇರುವ ಸೌಲಭ್ಯವಿದೆ.

	ಕನ್ನಡ ಅಧ್ಯಯನ ವಿಭಾಗ: ಈ ತನಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸ್ಥಾನ ಪಡೆದಿರುವ ದಕ್ಷಿಣ ಭಾರತೀಯ ಭಾಷೆಯೆಂದರೆ ಕನ್ನಡವೊಂದೇ. 1900ರಲ್ಲಿಯೇ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ಥಾನ ಪಡೆದರೂ ಕನ್ನಡಕ್ಕೆ ಪ್ರತ್ಯೇಕ ಅಧ್ಯಯನ ಮಂಡಳಿ ರಚಿಸಿದ್ದು 1959ರಲ್ಲಿ.

	ಕನ್ನಡ ಅಧ್ಯಯನ ಮಂಡಳಿ ಪ್ರಾರಂಭವಾದ ಬಳಿಕ ಎಮ್.ವಿ.(ಕನ್ನಡ) ತರಗತಿಗಳು ಪ್ರಾರಂಭವಾದರೂ ಕನ್ನಡಕ್ಕಾಗಿ ಪೂರ್ಣಮಟ್ಟದ ವಿಭಾಗವಿರಲಿಲ್ಲ. 1979ರಲ್ಲಿ ಪೂರ್ಣಮಟ್ಟದ ಕನ್ನಡ ಅಧ್ಯಯನ ವಿಭಾಗ ಸ್ಥಾಪನೆಗೊಂಡಿತು. 1979-82ರ ತನಕ ಚಿದಂಬರಕೃಷ್ಣ ದೀಕ್ಷಿತರು ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿದ್ದರು. 1984-89ರವರೆಗೆ ಶ್ರೀನಿವಾಸ ಹಾವನೂರರು ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿದ್ದರು. ಈಗ (1989) ತಾಳ್ತಜೆ ವಸಂತಕುಮಾರ್ ಅವರು ಮುಖ್ಯಸ್ಥರಾಗಿದ್ದಾರೆ.

	ಇಲ್ಲಿಯ ತನಕ ಕನ್ನಡ ವಿಷಯದಲ್ಲಿ ಐದು ಮಂದಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1948ರಲ್ಲಿ ಡಿ.ಎಸ್.ಕರ್ಕಿಯವರಿಗೆ ಕನ್ನಡ ಛಂದೋವಿಕಾಸಕ್ಕಾಗಿ ಮೊತ್ತಮೊದಲ ಪಿಎಚ್.ಡಿ ಪದವಿ ದೊರಕಿತು.

	1986ರಲ್ಲಿ ಕನ್ನಡದ ಹಿರಿಯ ಸಂಶೋಧಕರಾದ ಭೀಮರಾವ್ ಚಿಟಗುಪ್ಪಿಯವರಿಗೆ ಅವರ ಸಂಶೋಧನಾ ಕಾರ್ಯ ಹಾಗೂ ಕೃತಿಗಳನ್ನು ಗಮನಿಸಿ ಡಿ.ಲಿಟ್. ಪದವಿಯನ್ನು ನೀಡಿದೆ. ಇದು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡಕ್ಕೆ ಸಿಕ್ಕಿದ ಮೊತ್ತಮೊದಲ ಡಿ.ಲಿಚ್ ಪದವಿ.
(ಜಿ.ವಿ.ಎಸ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ